This was written for our Cousin Koota Newsletter which didn't get published.....
ಸುಬ್ಬಣ್ಣನ ನೆನಪುಗಳು.
ಸುಬ್ಬ.
ಶಿವ ಬರೆದ ಲೇಖನದ ತಲೆಬರಹ ನೋಡುತ್ತಲೇ ತುಂಬತೊಡಗಿದ ಕಣ್ಣುಗಳು ಓದಿ ಮುಗಿಸುವವರೆಗೂ ಹನಿಗರೆಯುತ್ತ ಹೋದವು. ಹಾಗೆಂದು ಆ ಲೇಖನವು ನಾನೆಣಿಸಿದಷ್ಟು ಭಾವುಕತೆಯಿಂದ ಕೂಡಿರದಿದ್ದರೂ ಹೇಗೋ ನನ್ನ ಮನಸ್ಸು ಅದರ ಕಡೆಯ ಸಾಲುಗಳನ್ನು ಗ್ರಹಿಸಿಬಿಟ್ಟಿತ್ತು. ಮುಂದೆ ಹಲವು ವರ್ಷಗಳು ಶಿವ ನನ್ನ ಬಾಸ್ ಆಗಿದ್ದಾಗ, ಕೆಲವಾರು ಸಂದರ್ಭಗಳಲ್ಲಿ ತನಗೆ ಕೋಪ ಬಂದಿದೆಯೆಂದೋ ಅಥವ ಬೇಸರವಾಗಿದೆಯೆಂದೋ ತೋರಿಸಿಕೊಂಡಾಗ, ಅಪ್ರಯತ್ನವಾಗಿ ಸುಬ್ಬಣ್ಣನ ಸಾವಿನ ನೆನಪಾಗುತ್ತಿತ್ತು. ಆಗ ಶಿವ ಸಿಂಗಪುರದಿಂದ ಮರಳಿ ನೇರವಾಗಿ ನಮ್ಮ ಮನೆಗೆ ಬಂದಿದ್ದ. ಅವನು ಮತ್ತೆ ಮತ್ತೆ ನೆನಪಿಸಿಕೊಂಡು ಬಿಕ್ಕಳಿಸಿ ಅಳುತ್ತಿದ್ದರೆ, ಗುಂಡಿ ಅತ್ತೆ ಮೂಕವಾಗಿ ಕಣ್ಣೀರು ಸುರಿಸುತ್ತ ಅವನ ತಲೆ ಸವರುತ್ತ ಕುಳಿತುಬಿಟ್ಟಿದ್ದರು. ಆ ಸಂಕಟದ ಚಿತ್ರಣ ಅಚ್ಚಳಿಯದೆ ಉಳಿವುದರ ಜೊತೆಗೆ ನೆನಪಾದಾಗಲೆಲ್ಲ ನನ್ನನ್ನು ಕಾಡುತ್ತದೆ.
ಸುಬ್ಬಣ್ಣ ಮುಂಬೈನಿಂದ ಬೆಂಗಳೂರಿಗೆ ವರ್ಗವಾದ ನಂತರ ನಮ್ಮ ಕುಟುಂಬಗಳ ನಡುವಿನ ಒಡನಾಟ ಜೋರಾಗಿಯೇ ಇತ್ತು. ಪುಟ್ಟ ಹುಡುಗಿಯರಾದ ಜ್ಯೋತ್ಸ್ನಾ ಮತ್ತು ಸ್ವಾತಿ ಮನೆಗೆ ಬರುತ್ತಾರೆಂದರೆ ನಮ್ಮ ವಸ್ತುಗಳನ್ನು ಮುಚ್ಚಿಡುವುದು, ಅವರು ಬಂದು ಒಂದೊಂದಾಗಿ ಹೆಕ್ಕಿ ತೆಗೆಯುವುದು, ನಾವು ಕೊಡದ್ದಿದ್ದಾಗ ಸ್ವಾತಿ ಅತ್ತು ಹೆದರಿಸುವುದು, ಇವುಗಳ ನಡುವೆ ನಿರರ್ಗಳವಾಗಿ ಸಾಗುತ್ತಿತ್ತು ನಮ್ಮಪ್ಪ-ಸುಬ್ಬಣ್ಣನ ನಡುವಿನ ಮಾತು-ಕತೆ! ತಮ್ಮಷ್ಟಕ್ಕೆ ತಾವು ಇರಲು ಇಚ್ಛಿಸುತ್ತಿದ್ದ ನಮ್ಮಪ್ಪನನ್ನು ಮಾತಿಗೆಳೆಯಬಲ್ಲ ಕೆಲವೇ ಜನರಲ್ಲಿ ಸುಬ್ಬಣ್ಣ ಒಬ್ಬರಾಗಿದ್ದರು. ನನಗೆ ತಿಳಿದಂತೆ ಅವರ ನಡುವಿನ ವಯಸ್ಸಿನ ಅಂತರವೂ ಕಡಿಮೆಯೇ ಇತ್ತು. ಹಾಗಾಗಿಯೂ ಕೆಲವು ಸಂದರ್ಭಗಳಲ್ಲಿ ನಮ್ಮಪ್ಪನ ಸಲಹೆಗಳನ್ನು ಪಡೆಯುತ್ತಿದ್ದುದ್ದನ್ನು ನೋಡಿ ನನಗೆ ವಯಸ್ಕರಿಗೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆಯೇ ಎಂದು ಆಶ್ಚರ್ಯವಾಗುತ್ತಿತ್ತು.
ಅವರು ಬಂದ ಹೊಸತರ ನೆನಪು ನನಗೆ ಸ್ಪಷ್ಟವಾಗಿ ಇಲ್ಲದಿದ್ದರೂ ಬ್ಯಾಂಕ್ ಕಾಲೋನಿಯಲ್ಲಿ ಅವರೇ ಮನೆ ಹುಡುಕಿಕೊಟ್ಟ ಕಾರಣ ನಾವು ನೆರೆ-ಹೊರೆಯವರಾಗಿ ಇದ್ದೆವು. ಆ ದಿನಗಳ ಪುಟ್ಟ ಶರತ್‍ಗೆ ಚಡ್ಡಿ-ಬನೀನ್‍ಗಳೇ ಕಂಫ಼ರ್ಟ್ ಜ಼ೋನ್‍ಗಳು!! ಮುಂದೆ ಚಿನ್ಮಯ ಮಿಶನ್ ಆಸ್ಪತ್ರೆಯ ಎದುರಿನ ಹೊಸ ಕಟ್ಟಡದಲ್ಲಿ ಅವರುಗಳು ಕಾಲಿಟ್ಟಿದ್ದು, ನಾವೆಲ್ಲಾ ನಗರದ ಒಂದು ಮೂಲೆಯಿಂದ ದೀರ್ಘ ಬಸ್ ಪಯಣದ ನಂತರ ಅವರ ಮನೆ ಮುಟ್ಟುತ್ತಿದ್ದುದೇ ಒಂದು ಮಜಾ, ಮತ್ತು ಮನೆ ಮೇಲಂತಸ್ತಿನಲ್ಲಿದ್ದರೂ ಕೆಳಗಡೆ ಆಟವಾಡಿಕೊಳ್ಳಲು ದೊಡ್ಡ ಸುರಕ್ಷಿತ ಜಾಗ ಹಾಗು ಬೇಕಾದಷ್ಟು ಮಕ್ಕಳು - ಇವುಗಳನ್ನು ಮರೆಯುವಂತಿಲ್ಲ!
ಪ್ರತಿಯೊಬ್ಬ ಮನುಷ್ಯನೂ ಸಂದರ್ಭಕ್ಕೆ ತಕ್ಕ ಹಾಗೆ ಭಿನ್ನವಾದ ರೂಪವನ್ನು ತೋರುವಂತೆ, ಆಫೀಸಿನಲ್ಲಿ ಫೋನೆತ್ತಿ "ಸುಬ್ಬಣ್ಣ" ಎಂದು ಗುರುಗುಡುವ ಮುಖ ಪರಿಚಯವಾದರೆ, ಮನೆಯಲ್ಲಿ ಚಪಾತಿ ಲಟ್ಟಿಸುವ ಸುಬ್ಬಣ್ಣ ಕಾಣಿಸಿಕೊಳ್ಳುತ್ತಿದ್ದರು. ಗುಂಡಿ ಅತ್ತೆಯ ಬಲ ತೋಳು ಅಥವ ತೋಳಿನ ಬಲ ಇವರಾಗಿ ಸಂಸಾರ ರಥ ಎಳೆದವರು, ಹುಡುಗಾಟದ ಕಿರಿಯರಿಗೆ ಸಿಂಹ ಸ್ವಪ್ನ - ಬೇಕಿದ್ದರೆ ಗಿರಿಜಿಯನ್ನೇ ಕೇಳಿ. ಅವರೆದುರಿನಲ್ಲಿ ನಮಗೆ ಒಂದು ರೀತಿಯ ಇರುಸು-ಮುರುಸು, ಸಣ್ಣದಾದ ಭಯ - ತಪ್ಪೆನಿಸಿದರೆ ನಮ್ಮ ಮೇಲೂ ರೇಗಿದ ಕಸಿನ್ ಬಹುಶಃ ಇವರೊಬ್ಬರೇ ಇರಬಹುದು. ಇದು ನಮ್ಮ ಅಪ್ಪನ ಒಟ್ಟಿಗೆ ಇದ್ದ ಸದರದಿಂದಲೂ ಇರಬಹುದು. ಆದರೂ ನಮ್ಮಪ್ಪನ ಬಗ್ಗೆ ಇದ್ದ ಅಭಿಮಾನ ಮತ್ತು ವಿಶ್ವಾಸ ಕೂಡ ಅಷ್ಟೇ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು.
ನಾವು ಚಂದ್ರಾ ಲೇ-ಔಟ್‍ನ ಬಳಿ ವಾಸಿಸುತ್ತಿದ್ದಾಗ ಒಂದು ಸಣ್ಣ ಘಟನೆ ನಡೆಯಿತು. ಯಾವುದೋ ವಿಚಾರಕ್ಕಾಗಿ ಅಲ್ಲಿನ ಹೊಸ ಎಕ್ಸ್‍ಚೇಂಜ್‍ಗೆ ಹೋಗಬೇಕಾಯಿತು. ಅಲ್ಲಿ ಪ್ರಭಾಕರ ಎಂಬ ಹೆಸರಿನ ಒಬ್ಬ ಲೈನ್‍ಮನ್, ವಯಸ್ಸಿನಲ್ಲಿ ಹಿರಿಯ, ಆಗೀಗ ಅಡಚಣೆಗಳ ಸಂಬಂಧವಾಗಿ ಭೇಟಿ ಮಾಡಿದ್ದುಂಟು. ತನ್ನಿಂದ ಇನ್ನೇನು ಬಯಸುತ್ತಾರೋ ಎಂಬಂತೆ ಈತ ಸದಾ ಹುಬ್ಬು ಗಂಟು ಹಾಕಿರುತ್ತಿದ್ದರು. ಅದೇನೋ ಅಂದು ಆತನನ್ನು ಮಾತಿಗೆಳೆದೆ. ತನ್ನ ಟಿವಿಎಸ್ ಮೊಪೆಡ್ ಹತ್ತಿ ಹೊರಡಲು ಅನುವಾಗುತ್ತಿದ್ದ ಅವರು ಹಾಗೇ ತಾನು ಶಂಕರಪುರಂ ಎಕ್ಸ್‍ಚೇಂಜಿನ ಹಳೆಯ ಹುಲಿ ಎಂದು ಬಿಟ್ಟು ಕೊಟ್ಟರು. ಆಗ ನಾನು ದ ಒನ್ ಅಂಡ್ ಓನ್ಲೀ ಸುಬ್ಬಣ್ಣನ ಹೆಸರು ತೆಗೆದೆ. ತಟ್ಟನೆ ಇಳಿದು, ವಾಹನಕ್ಕೆ ಸ್ಟ್ಯಾಂಡ್ ಹಾಕಿ, ಹದಿನೈದು ನಿಮಿಷಗಳ ಕಾಲ ಗದ್ಗದವಾಗಿ ಪೇಚಾಡಿಕೊಂಡರು ಆ ಪ್ರಭಾಕರ. ಕಲ್ಲಿನಂತೆ ತೋರ್ಪಡಿಸಿಕೊಂಡವರನ್ನು ತಟ್ಟನೆ ಮೇಣವಾಗಿ ಮಾಡಿದ ವ್ಯಕ್ತಿಯು ಗತಿಸಿ ಎಷ್ಟೋ ವರ್ಷಗಳು ಕಳೆದ್ದಿದರೂ ಆ ಮ್ಯಾಜಿಕ್ ನನ್ನ ಕಣ್ಣ ಮುಂದೆ ನಡೆದಾಗ ನಾನು ಮೂಕನಾಗಿದ್ದೆ. ಅಷ್ಟೇಕೆ, ಬಿ. ಟಿ. ಸುಬ್ಬಣ್ಣ ಎಂದರೆ ಬೆಂಗಳೂರು ಟೆಲಿಫೋನ್ಸ್ ಸುಬ್ಬಣ್ಣ ಎನ್ನ್ನುವ ಮಾತನ್ನು ನಾನು ಸರ್ವಸಾಮಾನ್ಯವಾಗಿ ಕೇಳಿದ್ದು, ಅವರು ತಮ್ಮ ಕಾರ್ಯಕ್ಷೇತ್ರದೊಡನೆ ಎಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದರು ಎಂಬುದಕ್ಕೆ ಅತಿ ಸೂಕ್ತವಾಗಿತ್ತು. ನನಗನ್ನಿಸಿತು, ಕೆಲಸದ ಸಂಬಂಧವಾಗಿ ಇವರನ್ನು ಸುಬ್ಬಣ್ಣ ತರಾಟೆಗೆ ತೆಗೆದುಕೊಳ್ಳದೇ ಇರದಿರುವ ಸಾಧ್ಯತೆ ಬಹಳ ಕಡಿಮೆ, ಆದರೂ ಅವರು ಎದುರಿಗೆ ಬಂದರೆ ತೋರುವಷ್ಟೇ ಗೌರವವನ್ನು ಇವರು ಇಂದೂ ತೋರುತ್ತಾರಲ್ಲ?
ಇದಕ್ಕೆ ಕಾರಣ ಏನು ಎಂದು ಹೇಳುವಾಗ ನಮ್ಮಪ್ಪನನ್ನೂ ನೆನಪಿಸಿಕೊಳ್ಳಬೇಕು. ಏಕೆಂದರೆ, ಇವರಿಬ್ಬರೂ ತಾಂತ್ರಿಕ ಶಿಕ್ಷಣವಿಲ್ಲದೆಯೂ ತಮ್ಮ ಸ್ವಂತ ಪರಿಶ್ರಮದಿಂದ ಆಯಾ ಕ್ಷೇತ್ರಗಳಲ್ಲಿ - ನಿಜವಾದ ಅರ್ಥದಲ್ಲಿ - ಮೆರೆದವರು. ನಂತರದ ದಿನಗಳಲ್ಲಿ, ನಮ್ಮ ಕುಟುಂಬದಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ನಾವುಗಳು ಕಾಲಿಡಲು ಮೇಲ್ಪಂಕ್ತಿ ಹಾಕಿದವರು ಇವರಿಬ್ಬರು ಎಂದರೆ ತಪ್ಪಾಗಲಾರದು. ಅಂತೆಯೇ, ಆ ಕಾಲದಲ್ಲಿ ಇವರ ಸುತ್ತ-ಮುತ್ತ ಇನ್ನೂ ಕೆಲವರು ಇದ್ದು, ಪರಸ್ಪರರ ಬೆಳವಣಿಗೆಗೆ ಪ್ರೇರಕವಾಗಿದ್ದರು ಎಂದೂ ಅನ್ನಿಸುತ್ತದೆ.
ಆ ನಿಟ್ಟಿನಲ್ಲಿ ಚಿದಂಬರಯ್ಯನವರು ನೆನಪಾಗುತ್ತಾರೆ: ’ಆಗುವುದಿಲ್ಲ’ ಎಂಬ ಉತ್ತರ ತಿಳಿಯದ ಪಾದರಸದಂತಹ ವ್ಯಕ್ತಿ, ನಮ್ಮಪ್ಪನನ್ನು ಏರ್-ಕಂಡೀಶನಿಂಗ್ ಕ್ಷೇತ್ರದಲ್ಲಿ ತೊಡಗಿಸಿದವರು. ನಂತರ ತಮ್ಮ ಮಗ ಶ್ರೀನಾಥನ ಭವಿಷ್ಯವನ್ನು ಕೂಡ ಅದೇ ರೀತಿ ರೂಪಿಸಿದರು, ಮತ್ತು ಕುಮಾರಸ್ವಾಮಿಗಳಿಗೂ ಒಂದು ಪ್ರೇರಕ ಶಕ್ತಿಯಾಗಿದ್ದರು ಎಂದು ನನಗೆ ಅನ್ನಿಸುತ್ತದೆ. ಇವರ ನಿಧನ ಕೂಡ ಸುಬ್ಬಣ್ಣನದಷ್ಟೇ ಹಠಾತ್ತಾಗಿದ್ದು ಎಲ್ಲರನ್ನೂ ಧೃತಿಗೆಡಿಸಿದ್ದರೂ ಇವರ ಅಂತಿಮಕ್ರಿಯೆಗಳಿಗಾಗಿ ದೊಡ್ಡ ಗುಂಪೊಂದೇ ಗೋಕರ್ಣಕ್ಕೆ ತೆರಳಿದ್ದು, ಬೇಸಿಗೆಯ ಸುಡು ಬಿಸಿಲಿನಲ್ಲೂ ರಜೆಯಲ್ಲಿದ್ದ ಸಣ್ಣವರೆಲ್ಲ ಲಗ್ಗೆ ಹೊಡೆದುದ್ದರ ನೆನಪು ಇಂದೂ ಹಸಿರು.
ಪ್ರಾಯಶಃ, ಹಿರಿಯರ ಅತಿ ದೊಡ್ಡ ಬಳುವಳಿ ಎಂದರೆ ಈ ಹೊಂಗೆ ಮರದ ತಂಪಿನಂತಹ ನೆನಪುಗಳು. ಜೀವನಪಥದಲ್ಲಿ ಸಾಗಲು ನಮಗೆ ಹಾದಿಯನ್ನು ತಿಳಿಸಿಕೊಟ್ಟದ್ದು ಇಂತಹ ಸಂದರ್ಭಗಳಲ್ಲಿನ ಅವರ ನಡವಳಿಕೆ. ಕೆಲವೊಮ್ಮೆ ಕೆಲವೊಂದರ ಬಗ್ಗೆ ವಿಶಾದವೂ ಹೊಮ್ಮಬಹುದು. ಅದು ಹಾಗೇ ಆಯಿತೋ ಇಲ್ಲವೋ, ಅದು ಬೇರೆ ರೀತಿ ಆಗಬಹುದಿತ್ತೇನೋ, ಹೀಗೆ ಆಗಿದ್ದಿದ್ದರೆ ಏನಾಗುತ್ತಿತ್ತೋ ಎಂಬ ಗೊಂದಲಗಳು ಕೆಲವು.
ಸುಬ್ಬಣ್ಣನ ಬಳಿ ಇದ್ದ ಮೋಟರ್ ಬೈಕಿನ ಸಂಖ್ಯೆ ೬೬೬. ಇದನ್ನು ನನಗೆ ಕೊಡಲು ಸಾರಿಗೆ ಅಧಿಕಾರಿಯು ಹಿಂದೆ-ಮುಂದೆ ನೋಡುತ್ತಿದ್ದ ಎಂದು ಸುಬ್ಬಣ್ಣ ಹೇಳಿ ನಕ್ಕಾಗ, ಅರ್ಥವಾಗದೆ ’ಏಕೆ?’ ಎಂದು ಕೇಳಿದ್ದೆ. ಅವನು ಕ್ರಿಶ್ಚಿಯನ್ ಅದಕ್ಕೆ ಎಂದಿದ್ದರು. ಹಾಗೂ, ಅದು ಸೈತಾನನ ಸಂಖ್ಯೆ ಎಂದು ನಂಬುತ್ತಾರೆ ಎಂದೂ ವಿವರಿಸಿದ್ದರು.
ಆ ಸಂಖ್ಯೆಯು ಬೇರೆ ಆಗಬಹುದಿತ್ತೇನೋ?

Labels: Cousin Koota
0 Comments:
Post a Comment
Subscribe to Post Comments [Atom]
<< Home